ಟ್ಯೂಬಿಂಗನ್
ಜರ್ಮನ್ ಸಂಯುಕ್ತ ಗಣರಾಜ್ಯದ (ಪಶ್ಚಿಮ ಜರ್ಮನಿ) ಬಾರ್ಡ್‍ನ್-ವರ್ಟಂಬರ್ಗ ರಾಜ್ಯದಲ್ಲಿರುವ ಒಂದು  ಕೈಗಾರಿಕಾ ನಗರ. ನೆಕರ್ ನದಿಯ ದಂಡೆಯ ಮೇಲೆ, ಆಮರ್ ಮತ್ತು ಷ್ಟೈನ್‍ಲಾಕ್ ನದಿಗಳು ಸಂಗಮಿಸುವ ಎಡೆಯಲ್ಲಿ (ಉ.ಅ.48032', ಪೊ.ರೇ.904'), ಷ್ಟಟ್‍ಗಾರ್ಟ್‍ನಿಂದ ದಕ್ಷಿಣಕ್ಕೆ ರಸ್ತೆಯ ಮೂಲಕ 22 ಮೈ. (35 ಕಿಮೀ.) ದೂರದಲ್ಲಿದೆ. ಜನಸಂಖ್ಯೆ 55,795 (1969 ಅಂ.). 1078ರ ವರೆಗೂ ಇದಕ್ಕೆ ಕ್ಯಾಸ್ಟ್ರ ಆಲಮನೋರಂ ಎಂಬ ಹೆಸರಿತ್ತು. 1477ರಲ್ಲಿ ಕೌಂಟ್ ಎಬರ್‍ಹಾರ್ಡ್‍ನಿಂದ ಸ್ಥಾಪಿತವಾದ ವಿಶ್ವ ವಿದ್ಯಾಲಯದಿಂದ ಈ ನಗರದ್ದು ಸಾಗರಿಕ ಮತ್ತು ಖಂಡಾಂತರಗಳ ನಡುವಣ ವಾಯುಗುಣ. ಹಳೆಯ ರೀತಿಯಲ್ಲಿ ನಿರ್ಮಿತವಾಗಿರುವ ಈ ನಗರ ಕ್ರಮಬದ್ಧವಾಗಿ ಬೆಳೆದಿಲ್ಲ. ನೆಕರ್ ನದಿಯ ಬಲದಂಡೆಯ ಭಾಗ ಸುಯೋಜಿತ ಅಲ್ಲಿ ಅನೇಕ ಸುಂದರವಾದ ಮನೆಗಳಿವೆ. ಟ್ಯೂಬಿಂಗನ್‍ನ ಹಳೆಯ ಕಾಲದ ಕಟ್ಟಡಗಳ ಪೈಕಿ 16ನೆಯ ಶತಮಾನದಲ್ಲಿ ನಿರ್ಮಿತವಾದ ಹೋಹೆನ್‍ಟ್ಯೂಬಿಂಗನ್ ಕೋಟೆಮನೆ ಪ್ರಮುಖವಾದ್ದು. ಈಗ ಇಲ್ಲಿ ವಿಶ್ವವಿದ್ಯಾಲಯದ ಗ್ರಂಥಾಲಯ ಬಹಳ ಪ್ರಖ್ಯಾತವಾದ್ದು. ಇಲ್ಲಿ 2 ಲಕ್ಷಕ್ಕೂ ಹೆಚ್ಚು ಗ್ರಂಥಗಳುಂಟು. ಯಹಾನೆಸ್ ಕೆಪ್ಲರ್, ಹಲ್ಡರ್ಲಿನ್, ಹೇಗಲ್ ಮುಂತಾದವರು ಇಲ್ಲಿ ವಿದ್ಯಾರ್ಥಿಗಳಾಗಿದ್ದರು. ಟ್ಯೂಬಿಂಗನ್‍ನಲ್ಲಿ ಲೋಹ, ಯಂತ್ರ, ಜವಳಿ, ಮರಗೆಲಸ ಮತ್ತು ಕಾಗದ ಕೈಗಾರಿಕೆಗಳಿವೆ.

	ಟ್ಯೂಬಿಂಗನ್ ನಗರವನ್ನು 1342ರಲ್ಲಿ ಕೌಂಟ್ ವೊರ್ಟೆಂಬರ್ಕ್ ಕೊಂಡುಕೊಂಡ 1495ರಲ್ಲಿ ಇದು ಒಂದು ಡಚಿ (ಡಚ್ ಪ್ರಭುತ್ವ) ಆಯಿತು. ಮೂವತ್ತು ವರ್ಷಗಳ ಯುದ್ಧದ ಕಾಲದಲ್ಲಿ ಪವಿತ್ತ ರೋಮನ್ ಚಕ್ರಾಧಿಪತ್ಯದ ಪಡೆಗಳು ಇದನ್ನು ಮೊದಲು ವಶಪಡಿಸಿಕೊಂಡಿದ್ದವು (1634). ಅನಂತರ ಇದು ಸ್ವೀಡರಿಗೂ (1638) ಫ್ರೆಂಚರಿಗೂ (1647) ವಶವಾಗಿತ್ತು. ಆಮೇಲೆ ಹಲವು ಬಾರಿ ಇದು ಫ್ರೆಂಚರ ಆಕ್ರಮಣಕ್ಕೆ ಒಳಗಾಗಿತ್ತು.
(ಆರ್.ಸಿಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ